ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ನನ್ನಲ್ಲಿ ವಿಶೇಷ ಜಿಜ್ಞಾಸೆ ಮೂಡಿಸಿದೆ.
ಕಾಲಕಾಲೇಶ್ವರ ಗ್ರಾಮದ ತಪ್ಪಲಿನಲ್ಲಿರುವ ಕಾಲಕಾಲೇಶ್ವರ ಬೆಟ್ಟದಲ್ಲಿ ಶ್ರೀ ಕಾಲಕಾಲೇಶ್ವರನ ಸನ್ನಿಧಾನವಿದೆ. ಇಲ್ಲಿ ಶಿವನ ಜಡೆಗಳು ಜೋತು ಬಿದ್ದಂತೆ ಆಲ ಮತ್ತು ಅರಳೆ ಬೇರುಗಳಿಂದ ಗಂಗೆಯ ಅವತರಣವಾದಂತೆ ನೀರು ಜಿನುಗುತ್ತದೆ. ಈ ಬೇರುಗಳ ಮುಖಾಂತರ ಬೀಳುತ್ತಿರುವ ನೀರನ್ನು ನೋಡಿದಾಗ ಸಾಕ್ಷಾತ್ ಗಂಗೆಯೇ ಶಿವನ ಜಡೆಯಿಂದ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಈ ಹಸಿರು ಸೊಬಗಿನ ಬೆಟ್ಟಕ್ಕೆ ಭೇಟಿ ನೀಡುವ ಆಸ್ತಿಕರಿಗೆ ವಿಶೇಷ ಅನುಭವ ನೀಡುತ್ತದೆ. ಮೇಲ್ಭಾಗದ ಪಡಿಯಿಂದ ಬೀಳುವ ತುಂತುರು ನೀರ ಹನಿಗಳು ನೋಡುಗರ ಮುಖಕ್ಕೆ ಮುತ್ತಿಟ್ಟು ಮಾಯವಾಗುತ್ತವೆ.ನಿಸರ್ಗ ಪ್ರೇಮಿಗಳಿಗೆ ಸ್ವರ್ಗ ಸುಖ ನೀಡುವ ಮನೋರಂಜನೀಯವಾದ ಈ ಗಂಗೆ ಗುಪ್ತಗಾಕಾಲಕಾಲೇಶ್ವರ ಕ್ಷೇತ್ರದ ಹಿರಿಮೆಗೆ ತನ್ನ ಕೊಡುಗೆ ನೀಡುತ್ತಿದ್ದಾಳೆ. ಬೆಟ್ಟದ ಮೇಲೆ ಕೆರೆ ಭಾವಿಗಳೇನೂ ಇಲ್ಲ. ಆದರೂ ವರ್ಷದ ೧೨ ತಿಂಗಳೂ ಸದಾ ಬೆಟ್ಟದ ಮೇಲಿಂದ ನೀರು ಜಿನುಗುತ್ತಲೇ ಇರುತ್ತದೆ. ಈ ನೀರು ಎಲ್ಲಿಂದ ಬರುತ್ತದೆಯೋ ಅದು ಜಿಜ್ಞಾಸೆಯ ವಿಷಯ. ಮಳೆಗಾಲದಲ್ಲಿ ಈ ನೀರು ರಭಸವಾಗಿ ಬೀಳುತ್ತದೆ. ಬೇಸಿಗೆಯಲ್ಲಿ ಈ ಜಲಧಾರೆ ತುಂತುರು ನೀರ ಹನಿಗಳಾಗಿ ಪರಿವರ್ತಿತಗೊಳ್ಳುತ್ತವೆ. ಈ ಸೃಷ್ಟಿ ಸೊಬಗಿನ ನಾಡಿನಲ್ಲಿ ಈ ಗಂಗೆ ಸಣ್ಣ ಜಲಪಾತದಂತೆ ಮನ ಸೆಳೆಯುತ್ತಾಳೆ. ಬೆಟ್ಟದ ಶಿಖರದಲ್ಲಿ ಪಾರಿವಾಳಗಳ ಸಂಕುಲ ಸಹ ಈ ಸೊಬಗನ್ನು ಇಮ್ಮಡಿಸುವಂತೆ ಮಾಡಿದೆ.
ಶ್ರೀ ಕಾಲಕಾಲೇಶ್ವರ ದೇವಸ್ಥಾನದ ಪೂಜಾರಿ ಮಲ್ಲಯ್ಯಸ್ವಾಮಿ ಅವರು ಹೇಳುವಂತೆ, ದೇವಸ್ಥಾನದ ಎಡ ಭಾಗದಲ್ಲಿ ೭ ಗವಿಗಳಿದ್ದು, ಆ ಗವಿಗಳಲ್ಲಿ ೭ ಹೊಂಡಗಳಿವೆ. ಆ ಎಲ್ಲ ಹೊಂಡಗಳ ತುಂಬ ನೀರು ೧೨ ತಿಂಗಳುಗಳ ಕಾಲ ತುಂಬಿರುತ್ತದೆ. ಮೊದಲ ಹೊಂಡ ಹೊರತು ಪಡಿಸಿ ಉಳಿದ ೬ ಹೊಂಡಗಳನ್ನು ಒಳಹೊಕ್ಕು ನೋಡಲು ಸಾಧ್ಯವಿಲ್ಲ. ಕಳಕೇಶ ಚಿಲಝರಿ ಅವರು ಅಭಿಪ್ರಾಯ ಪಡುವಂತೆ, ದೇವಸ್ಥಾನದ ಕೆಳಗಿಳಿದು ಬಂದರೆ ೫ ಹೊಂಡಗಳು ಕಾಣಸಿಗುತ್ತವೆ. ಈ ೫ ಹೊಂಡಗಳು ವರ್ಷದ ೧೨ ತಿಂಗಳುಗಳ ಕಾಲ ತುಂಬಿ ಹರಿಯುವ ಹೊಂಡಗಳು.
ಸಾಮಾನ್ಯವಾಗಿ ಗ್ರಾಮ ಎಂದರೆ ಸಾಕು. ಅಲ್ಲಿನ ನೀರಿನ ಬವಣೆಯನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಾಲಕಾಲೇಶ್ವರ ಗ್ರಾಮ ಬರ ಕಾಣದ ಗ್ರಾಮ. ಇಲ್ಲಿ ಗಂಗಾಧರ ಹಳ್ಳ ಮತ್ತು ಕಣಿವೆ ಹಳ್ಳಗಳು ಮೈದುಂಬಿ ಹರಿಯುತ್ತವೆ. ಹಾಗೆಯೇ ಈ ೫ ಹೊಂಡಗಳು ಇರುವುದರಿಂದ ಒಂದು ಹೊಂಡ ದೇವರ ಪೂಜೆಗೆ ಮೀಸಲಿದ್ದರೆ, ೨ನೇ ಹೊಂಡದ ನೀರು ಕುಡಿಯಲು, ೩ನೇ ಹೊಂಡದ ನೀರು ಸ್ನಾನ ಮಾಡಲು, ೪ನೇ ಹೊಂಡದ ನೀರು ಬಟ್ಟೆ ತೊಳೆಯಲು ಹೀಗೆ ಪ್ರತ್ಯೇಕವಾಗಿ ಭಕ್ತಾದಿಗಳು ನೀರನ್ನು ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಬೆಟ್ಟದಿಂದ ಧುಮುಕುವ ೨೦ಕ್ಕೂ ಹೆಚ್ಚು ನಯನ ಮನೋಹರ ಜಲಪಾತಗಳನ್ನು ನೋಡಿ ಆನಂದಿಸಬಹುದು.ಗಜೇಂದ್ರಗಡದ ಎಸ್.ಎಂ.ಭೂಮರೆಡ್ಡಿ ಕಾಲೇಜಿನಲ್ಲಿ ನಾವೆಲ್ಲ ಪದವಿ ವಿದ್ಯಾರ್ಥಿಗಳಾಗಿದ್ದ ಮೇಲಿಂದ ಮೇಲೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೆವು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ ಸಾಕಷ್ಟು ಬಾರಿ ಈ ಎಲ್ಲ ಹೊಂಡಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಇತ್ತೀಚೆಗೆ ನಾನು ಭೇಟಿ ನೀಡಿದ್ದಾಗ ಹೊಂಡಗಳೆಲ್ಲ ಕಳೆಗುಂದಿ ಕೊಚ್ಚೆಯ ಗುಂಡಿಗಳಂತಾಗಿದ್ದವು. ಈ ಬಾರಿ ಸೂಟಿಯಲ್ಲಿ ಊರಿಗೆ ಹೋದಾಗ ಸಮಾನಮನಸ್ಕ ಗೆಳೆಯರೆಲ್ಲ ಜೊತೆಗೂಡಿ ಮತ್ತೆ ಅವುಗಳನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದ್ದೇವೆ.
ನೀವು ಈ ಕ್ಶೇತ್ರಕ್ಕೆ ಭೇಟಿ ನೀಡಬೇಕೆ? ಹುಬ್ಬಳ್ಳಿಯಿಂದ ೫೨ ಕಿ.ಮೀ ದೂರದಲ್ಲಿದೆ ಗದಗ. ಅಲ್ಲಿಂದ ಗಜೇಂದ್ರಗಡ ೫೬ ಕಿ.ಮೀ. ಇಲ್ಲಿಂದ ಕೇವಲ ೪ ಕಿ.ಮೀ ದೂರದಲ್ಲಿದೆ ಶ್ರೀ. ಕಾಲಕಾಲೇಶ್ವರ ದೇವಸ್ಥಾನ. ಇಲ್ಲಿಗೆ ಬಸ್, ಟ್ಯಾಕ್ಸಿ ಮತ್ತು ಆಟೊ, ಟಾಂಗಾಗಳ ಮೂಲಕ ತೆರಳಬಹುದು. ಇಲ್ಲಿ ಯಾವುದೇ ಹೊಟೆಲ್ ಅಥವಾ ಪ್ರವಾಸಿ ಮಂದಿರಗಳು ಇಲ್ಲದ ಕಾರಣ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕು.