Wednesday, June 10, 2009

ಏಳು ಬೆಟ್ಟಗಳ ಸಂಗಮ ಗಜೇಂದ್ರಗಡ ಬೆಟ್ಟ






ಗದಗ ಜಿಲ್ಲೆಯಿಂದ ೫೬ ಕಿ.ಮೀ ದೂರವಿರುವ ಗಜೇಂದ್ರಗಡ ಛತ್ರಪತಿ ಮಹಾರಾಜರು ಆಳಿದ ಇತಿಹಾಸವನ್ನು ಹೊಂದಿದೆ ಇಲ್ಲಿ ಕೋಟೆ ಮತ್ತು ಹೊಂಡಗಳ ನಿರ್ಮಾಣವನ್ನು ಇಂದಿಗೂ ಇಲ್ಲಿ ಕಾಣಸಿಗುತ್ತವೆ.ಇವರು ತಾವು ನೀರು ಕುಡಿಯಲು ಒಂದು ಹೊಂಡವನ್ನು ಉಪಯೋಗಿಸಿದರೆ,ಇನ್ನೊಂದು ಹೊಂಡವನ್ನು ಹಾಲು ಮತ್ತು ಮೊಸರಿಗೆ ಇನ್ನೊಂದು ಹೊಂಡ,ಮತ್ತು ಹಸುಗಳಿಗೆ ನೀರು ಕುಡಿಸಲು ಇನ್ನೊಂದು ಹೊಂಡ ಹೀಗೆ ಅವರ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಆಳ್ವಿಕೆ ನೆಡೆಸುವಾಗ ಶತ್ರುಗಳನ್ನು ಸೆದೆಬಡೆಯಲು ಮದ್ದುಗಳನ್ನು ಬಳಸುತ್ತಿದ್ದರು ಮದ್ದು ಇರಿಸುತ್ತಿದ್ದ ಕೋಣೆ ಇಂದಿಗೂ ಕಾಣಸಿಗುತ್ತದೆ. ಹಾಗೇ ಹಿಂದಿನ ಕಾಲದಲ್ಲಿ ಆನೆ,ಬಸವಣ್ಣನ ಮುರ್ತಿಗಳನ್ನು ಗಚ್ಚಿನಲ್ಲಿ ನಿರ್ಮಾಣ ಮಾಡಿ ಹೊಂಡದ ದಡದ ಮೇಲೆ ಅವುಗಳನ್ನು ನಿರ್ಮಿಸಿದ್ದಾರೆ.




ಮೊದಲಿಗೆ ಬೆಟ್ಟದ ಮೇಲೆ ತೆರಳಲು ರಾಜರು ನಿರ್ಮಿಸಿದ ಮೆಟ್ಟಿಲುಗಳಿಂದ ಮೇಲೆ ಹೋಗಬೇಕಾಗಿತ್ತು ಆದರೆ ಈಗ ಬೆಟ್ಟದ ಮೇಲೆ ೪೮ ಗಾಳಿ ವಿದ್ಯುತ್ ಯಂತ್ರಗಳನ್ನು ನಿರ್ಮಾಣ ಮಾಡಿರುವದರಿಂದ ಯಂತ್ರಗಳನ್ನು ತಂದ ಮಾರ್ಗದಲ್ಲೆ ಈಗ ಬೆಟ್ಟದ ಮೇಲೆ ವಾಹನಗಳ ಮೂಲಕ ತೆರಳುತ್ತಾರೆ.ಬೆಟ್ಟದ ಮೇಲೆ ಹತ್ತಿದ ನಂತರ ತಂಪಾದ ಗಾಳಿಯ ವಾತಾವರಣ ನೋಡಬಹುದಾದ ರಾಜರ ಕಾಲದ ಕೋಟೆ,ಕಲ್ಲಿನ ತೊಟ್ಟಿಲು,ಮದ್ದಿನಕೋಣೆ,ಹೊಂಡಗಳು ಮತ್ತು ಅಕ್ಕ ತಂಗಿ ಕೂಡಿ ಎರಡು ಕಲ್ಲುಗಳ ಮೇಲೆ ಒಂದು ಬೃಹತ್ತಾದ ದೊಡ್ಡ ಕಲ್ಲನ್ನೆ ಎತ್ತಿ ಇಟ್ಟಿದ್ದಾರೆ ಎಂಬ ಪ್ರತೀತಿ ಇದೆ.



ಮಳೆಗಾಲ ಬಂತೆಂದರೆ ಸಾಕು ಬೆಟ್ಟದಿಂದ ದುಮುಕುವ ಜಲಪಾತಗಳನ್ನು ವೀಕ್ಷಿಸಬಹುದು ಬೆಟ್ಟದಿಂದ ನೀರು ರಭಸವಾಗಿ ಹರಿದು ಬರುವದರಿಂದ ಬೆಟ್ಟದ ಕೆಳಗೆ ಮಣ್ಣಿನಿಂದ ಕೂಡಿದ ದಿಬ್ಬಗಳು ಇರುವದರಿಂದ ಆ ನೀರಿನ ರಬಸಕ್ಕೆ ಕಣಿವೆಗಳಾಗಿ ಮಾರ್ಪಟ್ಟಿವೆ ಇಲ್ಲಿ ಸದಾ ನೀರು ಇರುವದರಿಂದ ಹಚ್ಚ ಹಸಿರಾದ ಪ್ರಕೃತಿಯನ್ನು ಕಾಣಬಹುದಾಗಿದೆ.



ಬೆಟ್ಟದ ಮೇಲಿಂದ ಸುತ್ತಲೂ ವಿಕ್ಷಿಸಿದರೆ ಕಾಣುವ ಸುಂದರ ನಯನ ಮನೋಹರವಾದ ಬೆಟ್ಟಗಳ ಸಾಲು ಮತ್ತು ಬೆಟ್ಟದ ಮಡಿಲಿನಲ್ಲಿ ಸುತ್ತಲು ಕಾಣುವ ಹಚ್ಚ ಹಸಿರಾಗಿ ಕಾಣುವ ಪ್ರಕೃತಿ ತಂಪಾದ ಗಾಳಿ ಮತ್ತು ಬೋರ್ಗರೆದು ಹರಿಯುವ ನೀರಿನ ಸಪ್ಪಳ ಎಲ್ಲವನ್ನು ನೋಡಿದರೆ ಒಂದು ಕ್ಷಣ ನಮ್ಮನ್ನೇ ನಾವು ಮರೆತುಬಿಡುತ್ತೇವೆ ಹಾಗಿದ್ದರೆ ನೀವು ಬನ್ನಿ ಪ್ರಕೃತಿಯ ಸೌಂದರ್ಯಕ್ಕೆ ಮೈ ಮರೆಯುವದು ಕಂಡಿತ

No comments:

Post a Comment